ಕಾಲೇಜಿನಲ್ಲಿ ನಡೆಯುತ್ತಿರುವ ನೂರು ದಿನದ ಶಿಬಿರದ ಅಂಗವಾಗಿ ಪ್ರದರ್ಶಿತಗೊಂಡ ಪುತಿನ ವಿರಚಿತ ನಾಟಕದ ಆಧಾರಿತ ನೃತ್ಯರೂಪಕ ಕಾಲೇಜಿನಲ್ಲಿ ನವೀಕೃತಗೊಂಡ 'ಆಪ್ತ ರಂಗಭೂಮಿ' ಮಾದರಿಯ ರಂಗಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶಿತಗೊಂಡಿತು. ಈಗಾಗಲೇ ಹಲವು ಕಡೆ ಪ್ರದರ್ಶಿತಗೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಈ ನೃತ್ಯ ಪ್ರಯೋಗವನ್ನು ಕುಮಾರಿ ಶ್ವೇತಾ ಅರೆಹೊಳೆಯವರು ನಿರ್ದೇಶಿಸಿ, ಅರೆಹೊಳೆ ಪ್ರತಿಷ್ಠಾನದ ನಂದಗೋಕುಲದ ಎಳೆ ಕಲಾವಿದರು ಅತ್ಯಂತ ಶಿಸ್ತುಬದ್ಧವಾಗಿ ಪ್ರದರ್ಶಿಸಿದರು. ಪ್ರೊಸೀನಿಯಂ ಮಾದರಿಯಲ್ಲೇ ಪ್ರದರ್ಶಿತಗೊಳ್ಳುತ್ತಿದ್ದ ಈ ಪ್ರಯೋಗವು, ಆಪ್ತ ಮಾದರಿಯಲ್ಲೂ ಸೈ ಎನಿಸಿಕೊಂಡಿದ್ದನ್ನು ಸ್ಮರಿಸಿದ ಪ್ರೇಕ್ಷಕರು, ನವೀಕೃತಗೊಂಡ ಈ ಶೈಲಿಯ ಸಭಾಂಗಣದಲ್ಲಿ ಮತ್ತಷ್ಟು ಪ್ರಯೋಗಗಳನ್ನು ವೀಕ್ಷಿಸುವ ಹಂಬಲವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಬಳಿಕ ನಡೆದ ವಿಮರ್ಶಾ-ವಿಶ್ಲೇಷಣೆ ಪ್ರಕ್ರಿಯೆಯಲ್ಲೂ ನೃತ್ಯರೂಪಕದ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಬಂದವು.
ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಆಲ್ವಿನ್ ಸೆರಾವೊರವರು ನೆರೆದ ಎಲ್ಲಾ ಕಲಾಸಕ್ತರನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಅರೆಹೊಳೆ ಪ್ರತಿಷ್ಠಾನದ ಗುರಿಕಾರ ಶ್ರೀ. ಅರೆಹೊಳೆ ಸದಾಶಿವರಾವ್ ಹಾಗೂ ನಿರ್ದೇಶಕಿ ಶ್ವೇತಾ ಅರೆಹೊಳೆಯವರನ್ನು ಗೌರವಿಸಲಾಯಿತು. ಪಾದುವ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಕ್ರಿಸ್ಟೋಫರ್ ನೀನಾಸಂ ಕಾರ್ಯಕ್ರಮ ನಿರ್ವಹಿಸಿ, ಕೇಂದ್ರದ ಮುಂದಿನ ನಿರಂತರ ಚಟುವಟಿಕೆಗಳ ಬಗ್ಗೆ ವಿವರ ನೀಡಿದರು. ಈ ರೂಪಕಕ್ಕೆ ಅದ್ಭುತವಾಗಿ ಲೆಸ್ಟರ್ ಮಿನೇಜಸ್ ಬೆಳಕಿನ ವಿನ್ಯಾಸ ಮಾಡಿದ್ದರು. ನೃತ್ಯರೂಪಕವನ್ನು *ಪಾದುವ ರಂಗ ಅಧ್ಯಯನ ಕೇಂದ್ರ*, *ಅಸ್ತಿತ್ವ (ರಿ.) ಮಂಗಳೂರು* ಜಂಟಿಯಾಗಿ ಆಯೋಜಿಸಿದ್ದರು. ತಾಂತ್ರಿಕತೆಲ್ಲಿ *ಆಹಾರ್ಯಂ* ಸಂಸ್ಥೆ ಸಹಕಾರ ನೀಡಿತ್ತು.