ಮಕ್ಕಳಿಗಾಗಿ ಆಸ್ತಿಪಾಸ್ತಿ ಮಾಡಿಡಬೇಡಿ, ಬದಲಾಗಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಅಂತರಾಷ್ಟ್ರೀಯ ತರಬೇತುದಾರರಾದ ಶ್ರೀ. ರಾಜೇಂದ್ರ ಭಟ್ ಇವರು, ಪಾದುವ ಪದವಿ ಕಾಲೇಜಿನ ಶಿಕ್ಷಕ ರಕ್ಷಕ ಸಭೆಯಲ್ಲಿ ಹೆತ್ತವರನ್ನು ಉದ್ದೇಶಿಸಿ ನುಡಿದರು. ಮುಂದುವರೆಸುತ್ತಾ ಅವರು, ಮಕ್ಕಳ ಜೊತೆ ಹೆತ್ತವರು, ಹೆತ್ತವರಾಗಿಯೇ ಉಳಿದು, ಅವರನ್ನು ಪ್ರತೀ ಕ್ಷಣದಲ್ಲೂ ಜಾಗೃತಗೊಳಿಸುತ್ತಿರಬೇಕು ಎಂದು ಹೇಳಿದರು. ಕಾಲೇಜಿನ ಸಂಚಾಲಕರಾದ ವಂದನೀಯ ವಿನ್ಸೆಂಟ್ ಮೊಂತೇರೊರವರು ಮಾತನಾಡಿ, ಇಂದಿನ ಕಾಲದ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ನಡುವೆ ನಡೆಯುವ ಸಂವಾದವು ಒಂದು ಮಹತ್ತರವಾದ ಭಾಗವಾಗಿದೆ. ಇದರಿಂದ ವಿಧ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪಾದುವ ಕಾಲೇಜಿನ ಸಭಾಂಗಣದಲ್ಲಿ ನಡೆದ ಪ್ರಸ್ತುತ ಶೈಕ್ಷಣಿಕ ವರ್ಷದ ಮೊದಲ ಶಿಕ್ಷಕ ರಕ್ಷಕ ಸಭೆಯಲ್ಲಿ ಪೋಷಕರಿಗೆ ಕಾಲೇಜಿನ ನಿಯಮಾವಳಿಗಳ ಬಗ್ಗೆ, ಕಾಲೇಜಿನಿಂದ ನಡೆಯುವ ಚಟುವಟಿಕೆಗಳ ಬಗ್ಗೆ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿಯನ್ನು ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಆಲ್ವಿನ್ ಸೆರಾವೊರವರು ವಿವರಿಸಿದರು. ಬಳಿಕ ಶಿಕ್ಷಕ ರಕ್ಷಕ ಸಂಘದ ಕಾರ್ಯಕಾರಿ ಸಮಿತಿಯನ್ನು ಆಯ್ಕೆಮಾಡಲಾಯಿತು. ಉಪಪ್ರಾಂಶುಪಾಲರಾದ ಶ್ರೀ. ರೋಶನ್ ಸಾಂತುಮಾಯರ್ ನೆರೆದ ಎಲ್ಲಾರನ್ನೂ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಶ್ರೀ. ಶ್ರೀಧರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ *ಶ್ರೀಮತಿ ಅಕ್ಷತಾ* ಇವರು ಕಾರ್ಯಕ್ರಮ ನಿರ್ವಹಿಸಿದರು. ಮತ್ತೋರ್ವ ಉಪನ್ಯಾಸಕಿ ಶ್ರೀಮತಿ ತನುಜಾರವರು ವಂದಿಸಿದರು.